ರತ್ನಾಕರನೆಂಬ ಕಡು ನಿರ್ದಯಿಯಾಗಿ ಬೆಳೆದು,
ನಾರದ ಮುನಿಗಳಿಂದ ಪರಿವರ್ತಿತರಾಗಿ,
ರಾಮ ಮಂತ್ರವ ಹಿಂದುಮುಂದಾಗಿ ಪಠಿಸುತ್ತಲೇ ಜೀವನವನ್ನು ಪಾವನವಾಗಿಸಿಕೊಂಡ,
ಆದಿಕಾವ್ಯವ ಜಗಕ್ಕೆ ನೀಡಿದ,
ಗರ್ಭವತಿ ಸೀರಜಾತೆಗೆ ಆಶ್ರಯವ ನೀಡಿ ಪಿತನಂತೆ ಸಲಹಿದ,
ಮಹಾಮಹಿಮ ಮಹರ್ಷಿ ವಾಲ್ಮೀಕಿಗಳು..
ಅದೆಷ್ಟು ಕಠೋರ ಹೃದಯ! ರತ್ನಾಕರನೆಂಬ ಹೆಸರು ಕೇಳಿದರೇ ಬೆಚ್ಚಿ ಹೋಗುವಷ್ಟು! ಕಾಡದಾರಿಯಲ್ಲಿ ಬರುವ ಜನರಿಗೆ ಭೀತಿ ಹುಟ್ಟಿಸಿ ಸುಲಭವಾಗಿ ಅವರ ಬಳಿಯಿದ್ದುದನೆಲ್ಲಾ ಸುಲಿದು, ತಾನೇನೋ ಆರಾಮವಾಗಿ ಪಾಪ ಕಟ್ಟಿಕೊಳ್ಳುತ್ತಿದ್ದ. ಹೆಸರಿಗೆ, ಮಾಡುವುದು ಯಾರ ಸಲುವಾಗಿ? ತನ್ನವರಿಗಾಗಿ!
ಅಲ್ಲಿಗೆ, ಸದಾ ನಾರಾಯಣನ ನಾಮಧ್ಯಾನ ಮಾಡುವ ನಾರದ ಮುನಿಗಳ ಭೇಟಿ! ತನ್ನವರಿಗಾಗಿ ಇದನ್ನೆಲ್ಲಾ ಮಾಡುತ್ತಿರುವೆನೆಂದು ಅಷ್ಟು ಗಡದ್ದಾಗಿ ಹೇಳುತ್ತಿರುವೆಯೆಲ್ಲಾ, ನೀನು ಮಾಡಿದ ಈ ಪಾಪಗಳಲ್ಲಿ ನಿನ್ನವರೆಷ್ಟು ಪಾಲನ್ನು ಹೊರುತ್ತಾರೆ? ಎಂದು ಮುಹರ್ಷಿ ನಾರದರು ಕೇಳಿದ ಒಂದೇ ಪ್ರಶ್ನೆಗೆ ಉತ್ತರ ಕಂಡುಕೊಂಡಾಗ, ಅದು ಹೇಗೆ ಅವರ ಬಾಳಿನ ದಿಕ್ಕನ್ನೇ ಸಂಪೂರ್ಣ ಬದಲಾಯಿಸಿಬಿಟ್ಟಿತು!! ರಾಮಲೀಲಿಯೇ ಸರಿ.
'ರಾಮ' ಎಂದು ಸರಿಯಾಗಿ ಉಚ್ಛರಿಸಲರಿಯದಷ್ಟೂ ತುಂಬಿಕೊಂಡಿದ್ದ ಪಾಪವು, ರಾಮಧ್ಯಾನಮಾತ್ರದಿಂದಲೇ ಸಂಪೂರ್ಣ ನಶಿಸಿ ಪುಣ್ಯಾತ್ಮರೇ ಆಗಿ ಜಗತ್ತಿಗೇ ಮಹಾಕಾವ್ಯವ ನೀಡುವಂತಾಯಿತು ಮಹರ್ಷಿ ವಾಲ್ಮೀಕಿಗಳು. ತನ್ನ ತನುವನ್ನೇ ಹುತ್ತವಾವರಿಸಿಕೊಂಡು, ಕಣ್ಣಿಗೇ ಕುತ್ತಿದರೂ ಮಿಟುಕಾಡದೇ ರಾಮಧ್ಯಾನಲೀಲರಾದರೆಂದರೆ ಆ ಪರಿವರ್ತನೆ ಎಂಥದ್ದಾಗಿರಬಹುದು!?
ಮುಂದೆ ಮಹರ್ಷಿಗಳಾಗಿ ಅದೆಷ್ಟು ಜ್ಞಾನಾರ್ಜನೆ ಮಾಡಿ, ಅದೆಷ್ಟು ವಿದ್ಯಾರ್ಥಿಗಳಿಗೆ ಗುರುಕುಲ ಶಿಕ್ಷಣ ನೀಡಿ, ಉನ್ನತ ವ್ಯಕ್ತಿಗಳಾಗಿ ಬೆಳಗಿಸಿದರೋ! ತಮ್ಮದೇ ಕೃತಿಯಲ್ಲಿ ತನ್ನ ಬಗ್ಗೆ ಉಲ್ಲೇಖಿಸದೇ, ಹೆಸರೆಂಬ ಕೆಸರಿಗೆ ಬೀಳದೇ, ಜಗದ ಆದಿಕಾವ್ಯವನ್ನು ರಚಿಸಿ, ತುಂಬು ಗರ್ಭಿಣಿ ರಾಮಸತಿ ಸೀತೆಗೆ ತಮ್ಮಾಶ್ರಮದಿ ಆಶ್ರಯ ನೀಡಿ, ತಂದೆಯಂತೆ ವಾತ್ಸಲ್ಯ ನೀಡಿ, ನಲ್ಮೆಯಿಂದ ಸಲಹಿ, ರಾಮನ ಮಕ್ಕಳಿಗೆ ಗುರುವಾಗಿ, ಲವ-ಕುಶರಿಂದಲೇ ರಾಮಾಯಣವ ಲೋಕಕ್ಕೆ ಪರಿಚಯಿಸಿದ ಮಹಾಮುನಿ..
ಮಹರ್ಷಿ ವಾಲ್ಮೀಕಿಗಳ ಜೀವನಚರಿತ್ರೆಯನ್ನು ಕಲಿತು, ಅರಿತು, ನಾವೂ ನಮ್ಮ ಬಾಳಿನಲ್ಲಿ ಅಲ್ಪ-ಸ್ವಲ್ಪವಾದರೂ ರೂಢಿಸಿಕೊಂಡರೆ!?
ಅವರ ಜೀವನಪಾಠವೇ 'ಆ ರಾಮನ ಧ್ಯಾನ ಮಾಡು. ಅವನಿಗೆ ಶರಣಾದರೆ ಸಾಕು, ನಿನ್ನ ಜೀವ-ಜೀವನವನ್ನು ಅವನೇ ಸಾರ್ಥಕಗೊಳಿಸುವನು ಎಂಬುದಲ್ಲವೇ!?'
ಪುಣ್ಯಾತ್ಮರ ಸ್ಮರಣೆಯಿಂದ ನಮಗೂ ಒಳಿತಾಗುವುದಂತೆ..
ರಾಮನ ಸೇವಕನಾಗುವ ಭಾಗ್ಯ ನಮಗಿಹುದೋ..ಇಲ್ಲವೋ.. !?
ಆದರೆ ರಾಮನ ಸೇವಕನ ಸೇವಕನ ಸೇವಕರಾಗಿ ಭಾವದಿಂದ ಭಜಿಸಿ, ಜಪಿಸಿ, ಪಠಿಸುವ ಭಾಗ್ಯವಂತೂ ಸದಾ ನಮ್ಮದು..
ಅದಕ್ಕಾಗಿ ವಾಲ್ಮೀಕಿ ಮಹರ್ಷಿಗಳ ಸ್ಮರಣೆ ಇಂದೂ, ಮುಂದೂ, ಅನವರತವೂ ನಮ್ಮ ಮನದಿ ನಡೆಯುತಿರಲಿ.. ✨🙏🏻✨
ಮಹರ್ಷಿ ವಾಲ್ಮೀಕಿಗಳ ಬಗ್ಗೆ ತಿಳಿದಿರುವುದು ಅಲ್ಪ, ತಿಳಿಯಲಿರುವುದು ಅಪಾರ.. ನನಗೆ, ನನ್ನಂತಹ ಹಲವಾರು ಪಾಮರಜೀವಗಳಿಗೆ ಇಂತಹ ಮಹಾಮಹಿಮರ ಬಗ್ಗೆ ತಮ್ಮ ಪ್ರವಚನಗಳಲ್ಲಿ ನಮಗೆಲ್ಲ ಪರಿಚಯಿಸುವ, ಮನದೊಳಗಿಳಿಸುವ ನಮ್ಮ ಕುಲಗುರುಗಳಿಗೆ ಅನಂತ ನಮನ.. ✨🙏🏻✨
-ಶ್ರೀಪದ
ತುಂಬಾ ಚಂದದ,ಭಾವದ ಬರಹ ..ಅಂಕಿತಾ..👌👍🙏
ReplyDelete