'ಸಮಯ' ಬಹು ಅಮೂಲ್ಯ!
ಅದರಲ್ಲೂ, ಚಿಕ್ಕಪುಟ್ಟ ಮಕ್ಕಳೊಡನೆ ಕಳೆವ ಸಮಯವಂತೂ ಅತಿ ಮಧುರವಾದ್ದು ಮತ್ತು ಮನಕೆ ಉಲ್ಲಾಸ ನೀಡುವಂಥದ್ದು..✨
ಅದೆಷ್ಟು ಸುವಿಚಾರಗಳು, ಅದೆಷ್ಟು ಪುಟ್ಟ ಪುಟ್ಟ ಖುಷಿ, ಅದೆಷ್ಟು ಮುಗ್ಧತೆ ತುಂಬಿದ ಹೊತ್ತು!
ಕೆಲವೊಂದು ಹಳೆಯ ವಿಷಯಗಳೂ ಅವರ ಬಾಯಲ್ಲಿ ಕೇಳುವಾಗ ಅದೆಷ್ಟು ಹೊಸದೆನಿಸುತದೆ!!
ಅವರ ಜೊತೆಗೆ ನಮ್ಮ ಸೃಜನಶೀಲತೆಯೂ ತಕ್ಕ ಮಟ್ಟಿಗೆ ಬೆಳೆಯುವುದು ಸುಳ್ಳಲ್ಲ..
ಇಷ್ಟೆಲ್ಲ ಅನಿಸಿದ್ದೇಕೆಂದರೆ, ನಾನು ಒಂದಿಡೀ ದಿನ ೪ನೇ ತರಗತಿಯ ಒಂದು ಪುಟ್ಟ ಬಾಲೆಯೊಡನೆ ಕಳೆದೆ!! ಅವಳೇ ದೀಪಿಕಾ!!
ನಂತೂರಿನ ಶ್ರೀಭಾರತೀ ಕಾಲೇಜಿನ ಅನ್ನಶ್ರೀ ಅನ್ನಕುಟೀರದ ಅಡಿಗೆಭಟ್ಟರು ರವಿ ಅಣ್ಣ, ಅವರ ಮಗಳೇ ದೀಪಿಕಾ.
ಮೊದಲು ಮಿತವಾದ ಮಾತು. ಸುಮಾರು ಪ್ರಶ್ನೆಗಳನ್ನುಇ ಕೇಳಾಯಿತು, ಸುಮಾರು ಉತ್ತರಗಳೂ ಬಂದಾದವು! ಮತ್ತೆ ಅಲ್ಪ ಹೊತ್ತಿನಲ್ಲಿ, ಆಕೆಯೇ ಹಾರಾಡುತ್ತಿದ್ದ ಹಕ್ಕಿಯ ತೋರಿಸಿ ಮಾತಾಡತೊಡಗಿದಳು. ಹೀಗೆ ಮಾತು ಬೆಳೆಯುತ್ತಾ ಹೋದಂತೆ ತನ್ನ ಮುಗ್ಧ ಭಾಷೆಯಲ್ಲಿ ಶಾಲೆ, ಅಣ್ಣ, ಗೆಳೆಯರು.. ಅವರ ಕುರಿತೆಲ್ಲಾ ಹೇಳತೊಡಗಿದಳು..
ಅವರು ೫ ಜನ ಗೆಳತಿಯರಂತೆ, ಶಾಲೆ ಪಕ್ಕ ಮರಕೋತಿ ಆಟವಾಡ್ತಾರಂತೆ, ಹಾಗೇ ಅವರ ಕ್ಲಾಸಲ್ಲೇ ಒಬ್ಬ ಟೀಚರ್ ಮಗಳು ಇದ್ದಾಳಂತೆ!! ಟೀಚರ್ ಮಗಳ ವಿಷಯದಲ್ಲಿ ರಾಜಕೀಯ ನಡೆವ ಕಥೆಯನ್ನೂ ಹೇಳಿದಳು. ಇದೆಲ್ಲಾ ಕೇಳಿದಾಗ ಈಗಷ್ಟೆ ಪದವಿ ಮುಗಿಸಿದ ನನಗೆ, ಬಾಲ್ಯದಲ್ಲಿ ನನ್ನ ತರಗತಿಯಲ್ಲಿದ್ದ ಟೀಚರ್ ಮಗಳು, ಆಗ ತರಗತಿಯ ಒಳಗೊಳಗೇ ನಡೆಯುತ್ತಿದ್ದ ರಾಜಕೀಯ, ತಾರತಮ್ಯಗಳು ನೆನಪಾದವು. ಈಗ 'ಎಷ್ಟು ಸಣ್ಣ ವಿಷಯ' ಎಂದೆನಿಸುತ್ತದೆ.. ಆದರೆ ಆ ವಯಸ್ಸಿನಲ್ಲಿ ಮಕ್ಕಳಿಗೆ ಅದಕ್ಕಿಂತ ಕಿರಿಕಿರಿ ನೀಡುವ ಸಂಗತಿ ಬೇರೊಂದಿಲ್ಲ!
ಆಗಲಿ, ಪುನಃ ವಿಷಯಕ್ಕೆ ಬರುತ್ತೇನೆ. ಹೀಗೆ ನಮ್ಮ ಮಾತು ಎಲ್ಲೋ ಆರಂಭವಾಗಿ ಬಹು ದೂರ ಸಾಗಿತು. ಮಾತಿನ ಜೊತೆ ಸಣ್ಣಪುಟ್ಟ ಆಟಗಳನ್ನೂ ಆಡಿದೆವು, ದನ-ಕರುಗಳ ಜೊತೆ ಸಮಯ ಕಳೆದೆವು. ದನದ ಹೆಸರು 'ನಂದಿನಿ', ಕರು 'ಭಾರತೀ'. ಆದರೆ ಇವಳು, 'ಅಕ್ಕಾ, ಈ ದನ ಲಕ್ಷ್ಮಿ ಅಲ್ಲವಾ?' ಅಂತ ಕೇಳಿದಳು. ನಾನೋ, ತೆಗೆದ ಬಾಯಿಗೆ 'ಅಲ್ಲ, ನಂದಿನೀ' ಅಂದೆ. ಅದಕ್ಕೆ, 'ಹಾಗಲ್ಲ ಅಕ್ಕ.. ಇದು ಲಕ್ಷ್ಮಿ, ದೇವರಲ್ವ..' ಅಂತ ಹೇಳಿದಳು! ಅವಳು ಬೆಳೆದ ವಾತಾವರಣ, ಮುಗ್ಧತೆ, ಸಂಸ್ಕಾರಗಳು ಅವಳ ಮಾತುಗಳಿಂದಲೇ ತಿಳಿಯುವಂತಿತ್ತು.
ಆಮೇಲೆ 'ಕಣ್ಣಾಮುಚ್ಚಾಲೆ ಆಡುವನಾ ಅಕ್ಕಾ?' ಅಂತ ಕೇಳಿದಳು. ಕಾಲೇಜಲ್ಲಿ ಕೆಲಸ ಇದ್ದಿದ್ದರಿಂದ 'ಆಮೇಲೆ ಆಡುವ ಪುಟ್ಟ, ಈಗ ಸ್ವಲ್ಪ ಕೆಲಸ ಇದೆ' ಅಂದು ನನ್ನ ಕೆಲಸಕ್ಕೆ ಹೋದೆ.
ಆಕೆ ಸುಮ್ಮನೇ "ಬೋರಾಗ್ತಿದೆ ಅಕ್ಕ, ಬನ್ನಿ" ಅಂತ ರಾಗ ಎಳೆಯಲ್ಲ, ಆಯ್ತೆಂದು ಒಪ್ಪಿಕೊಂಡು ತನ್ನ ಪಾಡಿಗೆ ಹೋದಳು. ಅವಳಪ್ಪನ ರೀತಿಯಲ್ಲೇ ಕೇಳಬೇಕಾದರೆ "ಅವಳು ವಾಯುವಿಹಾರಕ್ಕೆ ಹೋಗಿದ್ದಾಳೆ!".. ಮನೆಯಲ್ಲಿರುವ ತನಗಿಂತ ಪ್ರಾಯದಲ್ಲಿ ಒಂದೇ ವರ್ಷಕ್ಕೆ ದೊಡ್ಡವನಾದ ಅಣ್ಣ, ೩ ವರ್ಷ ವಯಸ್ಸಿನ ತಂಗಿಯನ್ನು ಬಿಟ್ಟು ಆಕೆ ತನ್ನಪ್ಪನೊಡನೆ ಇಲ್ಲಿ ಸಮಯ ಕಳೆಯಲು ಬಂದಿದ್ದಳು.. ಒಂದು ದಿನಕ್ಕಲ್ಲ, ವಾರವೊಂದಕ್ಕೆ!!
ಅವಳಿಗೆ ಯಾವ ವ್ಯಕ್ತಿ ಅಥವಾ ಸಾಧನದ ಅಗತ್ಯವೂ ಇಲ್ಲ, ಪ್ರಕೃತಿಯೊಡನೆಯೇ ಅವಳ ಆಟ, ಸಮಯ ಕಳೆಯುವಿಕೆ ಎಲ್ಲವೂ. ಅಲ್ಲೆಲ್ಲ ಹೋಗಿ ಆಟಾಡಿ ಬಂದಳು. ನನ್ನ ಕೆಲಸದಲ್ಲಿ ನಾನಿದ್ದೆ. ಸಂಜೆಯಾಯಿತು. ಮಧ್ಯೆ ಆಗೀಗ ಸಿಕ್ಕು ನಗುತ್ತಿದ್ದೆವು. ಕಣ್ಣ ಮುಚ್ಚಾಲೆ ಆಡಲು ಆಗಲೇ ಇಲ್ಲ. ಅವಳೂ, 'ಅಕ್ಕಾ ನೀವು ಬರಲೇ ಇಲ್ಲ' ಅಂತ ಹೇಳಲೂ ಇಲ್ಲ. ನಾವು ಮನೆಗೆ ಬಂದೆವು, ಅವಳಲ್ಲೇ ಇದ್ದಳು.
-
ಮುಂದಿನ ವಾರದಲ್ಲೇ ಮತ್ತೊಮ್ಮೆ ನಮ್ಮ ಭೇಟಿಯಾಯಿತು. ದೂರದಲ್ಲಿದ್ದಳು. ಕಂಡೊಡನೆಯೇ "ಅಕ್ಕಾ.." ಎಂದು ಓಡೋಡಿ ಬಂದಳು. ಪುನಃ ಒಂದಿಷ್ಟು ಮಾತುಕತೆ. ಒಂದಷ್ಟು ಆಟ. ಅಲ್ಲಿಯವರೆಗೂ ಅವಳು "ಅಕ್ಕಾ, ಅಕ್ಕಾ" ಅಂತ ಸಂಭೋದಿಸುತ್ತಿದ್ದಳೇ ಹೊರತು ಹೆಸರು ಕೇಳಿರಲೇ ಇಲ್ಲ. ನಾನೂ ಹೇಳಿರಲಿಲ್ಲ. ಆ ದಿನ ಮಧ್ಯಾಹ್ನ, 'ನನ್ನ ಹೆಸರು ಗೊತ್ತಿದೆಯಾ?' ಎಂದು ಕೇಳಿದಾಗ, ಇಲ್ಲ ಎಂದಳು. ಆಮೇಲೆ ನಾನೇ ಹೇಳಿದೆ. ಅದು ಅವಳಿಗೆ ನೆನಪುಳಿಯುತ್ತದೆಯಾ ಅಂತಲೂ ಗೊತ್ತಿಲ್ಲ. ಏಕೆಂದರೆ ಇಲ್ಲಿ ಹೆಸರಿನ ಅಗತ್ಯವೂ ಇಲ್ಲ. 'ನಿಷ್ಕಲ್ಮಷ ಬಾಂಧವ್ಯವೊಂದರಲ್ಲಿ ಹೆಸರಿನ ಅಗತ್ಯತೆಯಾದರೂ ಏನಿದೆ?' ಅನ್ನುವ ಒಂದು ದೊಡ್ಡ ಪಾಠವನ್ನೇ ಕಲಿಸಿತು ಆ ಸಂದರ್ಭ.
ಹಾಗೆಯೇ ಮಾತಾಡುತ್ತ, ಖುಷಿಯಿಂದ ಆಟವಾಡುತ್ತ ಪ್ರಕೃತಿ ಮಾತೆಯ ಮಡಿಲಲ್ಲಿ ಸುಂದರ ಕ್ಷಣಗಳ ಕಳೆದೆವು. ಮತ್ತೆ ಅವಳಿಚ್ಛೆಯಂತೆ ಎಲೆ-ಹೂಗಳಿಂದ ಒಂದು ಹೂಗುಚ್ಛ ತಯಾರಿಸಿದೆವು. ಹೂಗುಚ್ಛ ಏಕೆ ಎಂದರೆ.. 'ಇಲ್ಲಿರುವ ಟೀಚರುಗಳಿಗೆ ತೋರಿಸ್ಲಿಕ್ಕೆ' ಅಂತ! ಎಲ್ಲ ಟೀಚರುಗಳಿಗೂ ತೋರಿಸಿ, ಫೋಟೋ ತೆಗೆದು, ಖುಷಿಯಲ್ಲಿ ಸಂಭ್ರಮಿಸಿದೆವು. ಅಲ್ಲಿಗೆ ಈ ದಿನದ ಸಂಜೆಯಾಗುತ್ತಾ ಬಂದವು. ಅಂದು ಅವಳೂ ಮನೆಗೆ ಹೊರಡುವವಳಿದ್ದಳು.
ಮುಂದಿನ ವಾರ ಅಪ್ಪನೊಡನೆ ಅಣ್ಣ ಬರುವುದು ಅಂತ ಮುಂಚಿತವಾಗಿಯೇ ಒಪ್ಪಂದವಾಗಿದೆಯಂತೆ. ಹಾಗಾಗಿ ಹೂಗುಚ್ಛವನ್ನ 'ಅಣ್ಣ ನೋಡಲಿ' ಅಂತ ಅನ್ನಶ್ರೀಯಲ್ಲೇ ಇಟ್ಟಿರುವಳು!
ದೀಪಿಕಾಳೊಂದಿಗಿನ ಮಿಲನ ಮನಕ್ಕೆ ಬಹಳ ಮುದವನ್ನುಂಟುಮಾಡಿತು. ಪುಟಾಣಿಗಳೊಡನೆ ಪುಟಾಣಿಗಳಾಗಿ ಕಳೆಯುವ ಕ್ಷಣಗಳ ಆ ಮಜವೇ ಬೇರೆ. ವಾಸ್ತವವ ಮರೆತು ನಮ್ಮದೇ ಲೋಕಕ್ಕೆ ಪದಾರ್ಪಣೆ ಮಾಡಿ ಆನಂದಿಸುತ್ತೇವೆ. ಆ ಮೌಲ್ಯಯುತ ಕ್ಷಣಗಳು ಮತ್ತೆ ಮತ್ತೆ ಎಲ್ಲರ ಜೀವನದಲ್ಲೂ ಬರಲಿ ಎಂದ ಹಾರೈಸುತ್ತೇನೆ.
'ಪುಟ್ಟು'ವ ಪುಟ್ಟ ಬರಹ ಶ್ರೀಚರಣಕರ್ಪಿತ 🙏
~ ಶ್ರೀಪದ
ನಂಗಿಷ್ಟವಾಯಿತು
ReplyDeleteಧನ್ಯವಾದ ಅಪ್ಪಾ 😍
Deleteಭಾರಿ ಲಾಯಕ ಅಯಿದು ಅಂಕಿತ
ReplyDeleteಅಂದದ ಅನುಭವ! ಚಂದದ ಬರವಣಿಗೆ!❤��
ReplyDeleteಧನ್ಯವಾದಗಳು
Deleteಅಂಕಿತ ನಿನ್ನ ಬರಹ ಸೂಪರ್ ಆಗಿದೆ. ಈ ಮೊಬೈಲ್ ಇಂಟರ್ನೆಟ್ ಯುಗದಲ್ಲಿ ಪುಟ್ಟ ಮಕ್ಕಳೊಡನೆ ಮಕ್ಕಳಾಗಿ ಕಳೆವ ಅವಕಾಶ ಸಿಗುವುದು ಬಹಳ ಅಪರೂಪ. ಸಿಕ್ಕಿದರೂ ಆ ಸವಿ ಸಮಯದ ಬಳಕೆ ಮಾಡುವವರೇ ಇಲ್ಲ. ನೀನು ಕಳೆದ ಆ ಸಮಯ ಓದಿದಾಗ ಙೂ ಅಂಥಹ ಒಂದು ಮಗುವಾಗಬಾರದಿತ್ತೇ!!! ಎಂದೆನಿಸಿತು.
ReplyDeleteತುಂಬಾ ಧನ್ಯವಾದ ಅಜ್ಜಿ...
Deleteತುಂಬಾ ಚೆನ್ನಾಗಿದೆ ಪುಟ್ಟ ಮತ್ತು ಪುಟ್ಟು ಬರಹ
ReplyDeleteಧನ್ಯವಾದಗಳು ಮಾವ
Deleteಲಾಯಿಕ ಆಯಿದು ಅಂಕಿತ
ReplyDeleteಧನ್ಯವಾದಂಗೊ
Deleteಒಪ್ಪಕ್ಕನ ಒಪ್ಪ ಬರಹ.
ReplyDelete